ದೇವಾಲದಕೆರೆ ಪ್ರಕಾಶನ
ದೇವಾಲದಕೆರೆ ಪ್ರಕಾಶನ
ಕನ್ನಡ ಪುಸ್ತಕಗಳ ಆಲೆಮನೆ
ನೀನಾ ಮಾಟಗಾತಿ ? - ಮಂತ್ರ ತಂತ್ರದ ಹನ್ನೊಂದು ಕಥೆಗಳು. ಪ್ರೀ ಬುಕಿಂಗ್ ಲಭ್ಯವಿದೆ. ಬುಕಿಂಗ್ ಗಾಗಿ ಕೆಳಗಿನ ಕೊಂಡಿಯನ್ನ ಕ್ಲಿಕ್ ಮಾಡಿ.
ನಮ್ಮ ಪುಸ್ತಕಗಳ ಕಿರು ಪರಿಚಯ
ಅವಳು - ಬದುಕ ಕಳಿಸಿದವಳು
ಅದೆಷ್ಟು ಚೆನ್ನಾಗಿ ಬರೆಯುವಿರಿ ಅರ್ಜುನ್ ದೇವಾಲದಕೆರೆ. ಅವಳು ಕಾದಂಬರಿಯನ್ನು ನಾನು ಓದಿದ್ದು ಅರ್ಜುನ್ರ ಇನ್ನೊಂದು ಕಾದಂಬರಿ "ಆಟಗಾರ" ನನ್ನು ನನ್ನ ಕೈಯಾರೆ ಬಿಡುಗಡೆಗೊಳಿಸಿದ ನಂತರ, ಒಂದೇ ಗುಕ್ಕಿನಲ್ಲಿ ಓದಿಸಿಕೊಂಡಿತ್ತು ಅವಳು ಕಾದಂಬರಿ. ಕಾದಂಬರಿಯ ಪ್ರಾರಂಭದಲ್ಲಿ "ಅವಳನ್ನೋದುವ ಮುನ್ನ" ಎಂಬ ಪೀಠಿಕೆಯನ್ನು ಓದುತ್ತಿರುವಾಗ ಅರೆಕ್ಷಣ ನನ್ನ ಮಾವನವರಾದ ಕುವೆಂಪುರವರ ನೆನಪಾಗಿದ್ದು ಸುಳ್ಳಲ್ಲ. "ಅವಳು" ಎಲ್ಲೂ ಕೂಡ ಕಾಲ್ಪನಿಕವೆನಿಸುವುದಿಲ್ಲ. ನಮ್ಮ ಎದುರಲ್ಲೇ ನಡೆಯುತ್ತಿರುವ ನಮ್ಮ ಪಕ್ಕದ ಮನೆಯ ಹುಡುಗನ ಬದುಕಿನ ಏಳು-ಬೀಳುಗಳನ್ನು ಕಣ್ಣಾರೆ ಕಾಣುತ್ತಿರುವ ಭಾಸವಾಗುತ್ತದೆ. ಅವಳೊಳಗಿರುವ ಪ್ರೇಮ, ಅದನ್ನು ಕಾವ್ಯಾತ್ಮಕವಾಗಿ ಕೆಲವೆಡೆ ಪ್ರಸ್ತುತ ಪಡಿಸಿರುವ ರೀತಿಯಂತೂ ಅತ್ಯದ್ಭುತ. ಕಾದಂಬರಿಯನ್ನು ಸಂಪೂರ್ಣವಾಗಿ ಯುವಜನರಿಗೆ ಅರ್ಥವಾಗುವ ಭಾಷೆಯಲ್ಲಿ ಬರೆಯುತ್ತಾ ಹೋಗಿರುವುದು ಅರ್ಜುನ್ರವರ ಬಹುದೊಡ್ಡ ಶಕ್ತಿ. ನನ್ನ ಅಳಿಯ ನಾನೀ ಕಾದಂಬರಿಯನ್ನು ಮನೆಗೆ ತಂದ ಮರುದಿನ ಬೆಂಗಳೂರಿನಿಂದ ಬಂದಿಳಿದಿದ್ದರು. ಬರುವಾಗ "ಸ್ಟೀಫನ್ ಹಾಕಿನ್ಸ್'ರ ಪುಸ್ತವನ್ನು ಓದಲೆಂದು ಜೊತೆತಂದಿದ್ದರು. ಅದನ್ನು ಬದಿಗೆ ಸರಿಸಿ ಅರ್ಜುನ್ರವರ "ಅವಳು" ಮತ್ತು "ಆಟಗಾರ"ನನ್ನು ಕೈಗಿಟ್ಟಿದ್ದೆ. ಮುಗಿಸಿ ಎದ್ದವರು ಬಹಳವೇ ಸಂಭ್ರಮಪಟ್ಟರು. ಅರ್ಜುನ್ ದೇವಾಲದಕೆರೆ ಮಲೆನಾಡ ಭಾಗದಲ್ಲಿ ನಾ ಕಂಡ ಯುವಸಾಹಿತಿಗಳಲ್ಲಿ ಮುಂಚೂಣಿಯಲ್ಲಿರುವವರು. ಅವರೀಗ ಕನ್ನಡದ ರೈಸಿಂಗ್ ಸ್ಟಾರ್. ಅವರನ್ನು ಹರಸಿ ಬೆಳೆಸುವ ದೊಡ್ಡ ಜವಬ್ದಾರಿ ಕನ್ನಡಿಗರ ಮೇಲಿದೆ. ಜೊತೆಗೆ ನೀವು ಪುಸ್ತಕಕ್ಕೆ ಕೊಡುವ ದುಡ್ಡಿನ ದುಪ್ಪಟ್ಟು ನೀವೀ ಪುಸ್ತಕದಿಂದ ಪಡೆಯುತ್ತೀರೆಂಬುದು ನನ್ನ ಅಂಬೋಣ. ಇವರ "ಆಟಗಾರ" ಕೂಡ ಅದ್ಭುತವಾಗಿದ್ದಾನೆ. ಸಾಧ್ಯವಾದಲ್ಲಿ ಇವರ ಎಲ್ಲಾ ಪುಸ್ತಕಗಳನೊಮ್ಮೆ ಓದಿನೋಡಿ.
ಶುಭವಾಗಲಿ ಅರ್ಜುನ್ ದೇವಾಲದಕೆರೆ ನಿಮ್ಮ ಬರಹ ನಾಗಾಲೋಟದಿಂದ ಸಾಗಲಿ. ಕನ್ನಡ ಸಾಹಿತ್ಯಕ್ಕೆ ಬಹಳಷ್ಟು ಕೊಡುಗೆ ನೀಡಲಿ.
-ಶ್ರೀಮತಿ ರಾಜೇಶ್ವರಿ ತೇಜಸ್ವಿ (ಖ್ಯಾತ ಲೇಖಕ (ದಿ॥ ಪೂರ್ಣ ಚಂದ್ರ ತೇಜಸ್ವಿಯವರ ಧರ್ಮಪತ್ನಿ ಹಾಗೂ ಕುವೆಂಪುರವರ ಮುದ್ದಿನ ಸೊಸೆ)
ಆಟಗಾರ - ಕಾಲಾಯ ತಸ್ಮೈ ನಮಃ
ಕನ್ನಡದ ಯುವಕ-ಯುವತಿಯರು ಕನ್ನಡ ಕಾದಂಬರಿಗಳನ್ನು ಓದುವುದಿಲ್ಲ, ಅದರಲ್ಲೂ ಈ ಕಾರ್ಪೋರೇಟ್ ಕನ್ನಡಿಗರು ಕೇವಲ ಇಂಗ್ಲೀಷ್ ಕಾದಂಬರಿಗಳನ್ನು ಮಾತ್ರ ಓದುತ್ತಾರೆ ಎಂಬ ಆರೋಪವನ್ನು ಸುಳ್ಳಾಗಿಸಿದ್ದು, "ಅವಳು... ಬದುಕ ಕಲಿಸಿದವಳು' ಕಾದಂಬರಿ. ಜನಸಾಮಾನ್ಯನ ದೃಷ್ಟಿಯಲ್ಲಿ ಯೋಚಿಸಿ, ಜನಸಾಮಾನ್ಯನ ಭಾಷೆಯಲ್ಲಿ ಬರೆದರೆ. ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ಪುಸ್ತಕಗಳನ್ನು ಓದುತ್ತಾನೆ ಎಂಬುದನ್ನು ನನ್ನಂತಹ ಚೊಚ್ಚಲ ಕಾದಂಬರಿಕಾರನ ಪುಸ್ತಕವನ್ನು ಭರ್ಜರಿಯಾಗಿ ಗೆಲ್ಲಿಸುವ ಮೂಲಕ ಋಜುವಾತುಪಡಿಸಿದ್ದಾನೆ ಕನ್ನಡಿಗ. ಕಾದಂಬರಿಯನ್ನು ಓದಿದದವರಲ್ಲಿ ಬಹಳಷ್ಟು ಜನ "ಸರ್ ಇದು ನನ್ನ ಮೊದಲ ಕನ್ನಡ ಕಾದಂಬರಿ, ಕನ್ನಡದಲ್ಲೂ ಈ ತರಹದ ಕಾದಂಬರಿಗಳಿವೆ ಎಂಬುದು ತಿಳಿದಿರಲಿಲ್ಲ. ಇನ್ನಷ್ಟೂ ಕನ್ನಡ ಪುಸ್ತಕಗಳನ್ನು ಓದುತ್ತೇವೆ" ಎಂಬ ಅನಿಸಿಕೆಯನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದನ್ನು ನೀವುಗಳ ಸಹ ಓದಿದ್ದೀರಿ. ಜೊತೆಗೆ ಹಲವಷ್ಟು ಪ್ರೇಮಿಗಳಿಗೆ ಪಾಠವಾಗಿದ್ದು, ಬದುಕಲ್ಲಿ ಬಸವಳಿದವರಿಗೆ, ಬದುಕ ಹೋರಾಟದಲ್ಲಿ ಸ್ಫೂರ್ತಿಯಾಗಿದ್ದು ಇದೇ "ಅವಳು. ಆ ಮಟ್ಟಿಗೆ ಅವಳು ಕೇವಲ ಮಾರಟಕ್ಕಷ್ಟೇ ಸೀಮಿತವಾಗದೆ ಜನರ ಮನಸನ್ನು ತಟ್ಟುವಲ್ಲಿ, ಬದುಕಿನ ಪಾಠ ಹೇಳುವಲ್ಲಿ ಯಶಸ್ವಿಯಾಗಿತ್ತು. ಈಗ ಬದುಕಿನ ಪಾಠ ಹೇಳುವ ಮತ್ತೊಂದು ಕಾದಂಬರಿಯನ್ನು ನಿಮ್ಮ ಕೈಯಲ್ಲಿಟ್ಟಿದ್ದೇನೆ ಅದೇ "ಆಟಗಾರ ಕಾಲಾಯೇ ತಸ್ಯೆ ನಮಃ". "ಅವಳು" ವಸ್ತುಭೂತವಾದ ನನ್ನ ಆತ್ಮಕಥೆ. ಅಲ್ಲಿ ಕಲ್ಪನೆಗೆ ಮತ್ತು ಸೃಜನಶೀಲತೆಗೆ ಅವಕಾಶವಿರಲಿಲ್ಲ. ನಡೆದದ್ದನ್ನು ನಡೆದ ಹಾಗೆಯೇ ಅಕ್ಷರ ರೂಪಕ್ಕಿಳಿಸಿದ್ದೆ. ಆದರೆ ಆಟಗಾರ ಹಾಗಲ್ಲ. ಇಲ್ಲಿ ಎಲ್ಲವೂ ಇದೆ. ನನ್ನ ಸುತ್ತ ನಡೆದ ಹಲವು ಸತ್ಯ ಘಟನೆಗಳನ್ನು ಒಂದು ಸೃಜನಶೀಲ ಚೌಕಟ್ಟಿನಲ್ಲಿಟ್ಟು, ಕಲ್ಪನೆಯ ಕುಂಚದಲಿ ಕಾದಂಬರಿಯಾಗಿಸಿದ್ದೇನೆ. ಕಾರ್ಪೋರೇಟ್ ನಿಂದ ಕಾನನದವರೆಗೂ ಕಥೆಯ ವಿಸ್ತಾರವಿದೆ. ಒಂದು ನವಿರು ಪ್ರೇಮದೆಳೆಯ ಜೊತೆ, ಕುತೂಹಲಕಾರಿ ಕಥಾಹಂದರವನ್ನು ಹೆಣೆಯಲು ಪ್ರಯತ್ನಿಸಿದ್ದೇನೆ. ಯುವ ಮನಸ್ಸುಗಳನ್ನು ಗಮನದಲ್ಲಿಟ್ಟುಕೊಂಡು ಹೆಣೆದಿರುವ ಹಂದರ ಪ್ರಬುದ್ಧ ಓದುಗರನ್ನು ಕಾಡುವಂತಿದೆ. ಆಟಗಾರನ ಬಗ್ಗೆ ಹೆಚ್ಚೇನು ಹೇಳಲಾರೆ. ಕಾದಂಬರಿ ನಿಮ್ಮ ಕೈಯಲ್ಲಿದೆ ನೀವು ಓದಿ ಹೇಳಿ ಆಟಗಾರ ಹೇಗಿದ್ದಾನೆಂದು. ಶುಭವಾಗಲಿ, "ಅವಳು"
ತುಂಬು ಪ್ರೀತಿಯೊಂದಿಗೆ,
-ಅರ್ಜುನ್ ದೇವಾಲದಕೆರೆ
ಅತೀತ - ಒಂದು ಅಲೌಕಿಕ ಪ್ರೇಮ ಕಥೆ
ಶ್ರೀಯುತ ಅರ್ಜುನ್ದೇವಾಲದಕೆರೆ ಅಪ್ಪಟ ಮಲೆನಾಡಿನವರು. ನಮ್ಮೂರಿನವರು, ಪಶ್ಚಿಮಘಟ್ಟದ ಕಾಡೊಳಗಿಂದ ಎದ್ದು ಬಂದವರು. ಹಾಗಾಗಿ ಅವರಿಗೆ ಮಲೆನಾಡಿನ ಪಟ್ಟುವರಸೆಗಳೆಲ್ಲವೂ ಕರಗತ. ಮಲೆನಾಡಿನಲ್ಲೇ ಹುಟ್ಟಿದವರಿಗಲ್ಲದೆ ಬೇರೆಯವರಿಗೆ ಮಲೆನಾಡಿನ ವರ್ಣನೆ ಸಾಧ್ಯವಿಲ್ಲ. ಅಲ್ಲಿನ ಬದುಕು. ಹಳ್ಳಿ, ಗದ್ದೆ, ತೋಟ, ಶಿಕಾರಿ, ಅಲ್ಲಿನ ಬೆರಗು ಅಂಥವರೊಳಗೆ ಹಾಸುಹೊಕ್ಕಾಗಿರುತ್ತದೆ. ಮಲೆನಾಡಿನ ಕಾಡೊಳಗೆ ಭೋರ್ಗರೆದು ಸುರಿಯುವ ಮಳೆಗಾಲದ ಮಧ್ಯದ ಮಳೆಯ ವರ್ಣನೆಯನ್ನು ಬಯಲು ಸೀಮೆಯಲ್ಲಿ ಹುಟ್ಟಿದವರು ಎಂದಿಗೂ ವರ್ಣನೆ ಮಾಡಲು ಸಾಧ್ಯವಿಲ್ಲ. ಜೊತೆಗೆ ಅದನ್ನು ಕೃತಿಯೊಳಗೆ ತರಲು ಒಳನೋಟ ಬೇಕು. ಬರಹ ತಿಳಿದಿರಬೇಕು. ಅದಕ್ಕೊಂದು ರೂಪ ಕೊಡುವ ಶಕ್ತಿ ಬೇಕು. ಅರ್ಜುನ್ ಅವರಿಗೆ ಇದೆಲ್ಲವೂ ಕರಗತವಾಗಿದೆ. ಇದರಲ್ಲಿ ಮೇಲೆ ಹೇಳಿದ ಎಲ್ಲದರ ಸಾರವೂ ಇದೆ. ಕತೆ, ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ. ಅಲ್ಲಿನ ಆಡುಭಾಷೆಯನ್ನು ಧಾರಾಳವಾಗಿ ಬಳಸಿಕೊಂಡಿದ್ದಾರೆ. ಅದು ಕೃತಿಗೊಂದು ಕಳೆ ತಂದುಕೊಟ್ಟಿದೆ. ಅರ್ಜುನ್ ಅವರಿಗೆ ಬರಹವೂ ಹೊಸತಲ್ಲ. ಈಗಾಗಲೇ ಎರಡು ಕೃತಿಗಳನ್ನು ಹೊರಗೆ ತಂದವರು ಅವರು. ಹೃನ್ಮಯಿ ಅವರ ಮೂರನೆಯ ಕೃತಿ. ಅವರಿಗೆ ಸಿಟಿಯ ಅನುಭವವೂ ಇದೆ. ಕಾಡುಬದುಕಿನ ಅನುಭವವೂ ಇದೆ. ಎರಡರ ಸಮ್ಮಿಳನ ಅವರ ಕೃತಿಯಲ್ಲಿ ಮೂಡಿ ಬಂದಿದೆ. ಹಾಗಾಗಿ ಹಳ್ಳಿ ಬದುಕಿನ ತಾಜಾತನದ ಶಿಕಾರಿಯಿಂದ ಹಿಡಿದು ಸಿಟಿ ಬದುಕಿನ ಜೊತೆಗೆ ವಾಮಾಚಾರದ ಭಯಾನಕ ಲೋಕದಲ್ಲೂ ನಿಮ್ಮನ್ನು ಸುತ್ತಾಡಿಸುತ್ತಾರೆ. ಮಲೆನಾಡಿನಲ್ಲೇ ಹುಟ್ಟಿ ಅದರ ಒಳಗೆ ನಿಂತು ನೋಡುತ್ತಾ ಬರೆಯುವವರು ಬೆರಳೆಣಿಕೆಯಷ್ಟು, ಇತ್ತೀಚೆಗೆ ಅವರ ಸಂಖ್ಯೆ ಸ್ವಲ್ಪಮಟ್ಟಿಗೆ ಹೆಚ್ಚುತ್ತಿದೆ. ಮಲೆನಾಡಿನ ಪರಿಚಯವೂ ಹೊರಜಗತ್ತಿಗೆ ಆಗುತ್ತಿದೆ. ಪಶ್ಚಿಮಘಟ್ಟ ಎಂದಿಗೂ ನಿಗೂಢವೇ. ಎಷ್ಟು ಜನ ಬರೆದರೂ ಅಲ್ಲಿರುವ ಸರಕು ಖಾಲಿಯಾಗುವುದಿಲ್ಲ. ಯುವ ಪೀಳಿಗೆಯ ಬರಹಗಾರರಲ್ಲಿ ಅರ್ಜುನ್ ದೇವಾಲದಕೆರೆಯವರು ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವರಿಂದ ಇನ್ನೂ ಬಹಳಷ್ಟನ್ನು ನಿರೀಕ್ಷಿಸಬಹುದು.
-ಗಿರಿಮನೆ ಶ್ಯಾಮರಾವ್
ಮಿಕ್ಸ್ ಅಂಡ್ ಮ್ಯಾಚ್ - ಬದುಕು ಭಾವದ ನೂರು ಕಥೆಗಳು
"ಹೇ ಇವ್ರೇನ್ ಇಲ್ಲಿ..!?" ಆತನನ್ನು ಅಲ್ಲಿ ನೋಡಿದ ಕೂಡಲೇ, ಆ ಸಾವಿನ ಮನೆಯಲೆಲ್ಲ ಸಂಚಲನದ ಜೊತೆಗೆ ಗುಸುಗುಸು ಹಬ್ಬಿತ್ತು. ಅರವತ್ತು ವರ್ಷಗಳ ತುಂಬು ಜೀವನವನ್ನ ನಡೆಸಿದ್ದ ಅನ್ನಪೂರ್ಣ, ಅಂದು ಇಹ ಲೋಕ ತ್ಯಜಿಸಿದ್ದರು. ಅವರ ಪಾರ್ಥಿವ ಶರೀರವನ್ನ ದರ್ಶನ ಮಾಡಲು ಬರುತ್ತಿದ್ದವರ ಸಾಲಿನಲ್ಲಿ, ಅನ್ನಪೂರ್ಣರವರಷ್ಟೇ ವಯಸ್ಸಾದ, ಆ ಜಿಲ್ಲೆಯ ಪ್ರಸಿದ್ಧ ವ್ಯಕ್ತಿಯೊಬ್ಬ ಕಣ್ಣಲ್ಲಿ ನೀರು ತುಂಬಿಕೊಂಡು ನಿಂತಿದ್ದ. ಗುಸುಗುಸು ಅನ್ನಪೂರ್ಣರವರ ತಮ್ಮನ ಕಿವಿಗೂ ತಲುಪಿ, ಯಾರೆಂದು ಬಗ್ಗಿ ನೋಡಿದವನ ಕಣ್ಣಲ್ಲಿ ಅರೆಕ್ಷಣ ಅಚ್ಚರಿಯೊಂದು ಹಾದುಹೋಗಿತ್ತು. ಅನ್ನಪೂರ್ಣ ಮನಸಾರೆ ಪ್ರೀತಿಸಿದ ವ್ಯಕ್ತಿಯವನು. ಅವರಿಬ್ಬರದು ಅಮರ ಪ್ರೇಮಕತೆ. ಜೀವಕ್ಕೆ ಜೀವವಾಗಿ ಪ್ರೀತಿಸಿ, ಕೊನೆಗೆ ಅಪ್ಪ-ಅಮ್ಮನ ಮಾತಿಗೆ, ಬೆದರಿಕೆಗೆ ಹೆದರಿ ಬೇರೆಯವನನ್ನು ಮದುವೆಯಾಗಿದ್ದರು ಅನ್ನಪೂರ್ಣಮ್ಮ, ಅಮೇಲೆ ಎಂದಿಗೂ ಅವರು ಭೇಟಿಯಾಗಿರಲಿಲ್ಲ. ಒಬ್ಬರಿಗೊಬ್ಬರ ಇರುವುಗಳ ಮಾಹಿತಿಯಿದ್ದರೂ, ಮುಖತಃ ಎಂದು ಭೇಟಿಯಾಗಲೇ ಇಲ್ಲ. ಅದಾದ ಮೇಲೆ ಬಹುಷಃ ಇದೇ ಅವರ ಮೊದಲ ಭೇಟಿ. ಗುಸುಗುಸು ಮಾತುಗಳ ಪರಿವೆಯೇ ಇಲ್ಲದ ಆತ, ಕಣ್ಣಲ್ಲಿ ಹರಿಯುತ್ತಿದ್ದ ನೀರನ್ನು ಒರೆಸಿಕೊಳ್ಳುವ ಗೋಜಿಗೆ ಬೀಳದೆ "ಹೇಳಿಲ್ಲ ನಿಂಗೆ, 'ಎಲ್ಲೇ ಇರು, ಯಾರ ಜೊತೆನಾದ್ರು ಇರು, ಖುಷಿಯಾಗಿರು, ಆದ್ರೆ ನಂಗಿಂತ ಮುಂಚೆ ಈ ಭೂಮಿ ಬಿಟ್ಟೋಗ್ಗೇಡ, ನಿನ್ನ ಭೌತಿಕ ಇರುವಿಲ್ಲದೆ ನಾ ಇರಲ್ಲ ಅಂತ' ಹೇಳು ಯಾಕ್ ಬಿಟ್ಟೋದೇ !?" ಅನ್ನಪೂರ್ಣರ ಜೀವವಿಲ್ಲದ ದೇಹದೊಡನೆ, ಮನಸ್ಸಲ್ಲೇ ಮಾತನಾಡುತ್ತಿದ್ದನಾತ.
#ಕೆಲವೊಂದು ಪ್ರೇಮಕತೆಗಳಿಗೆ ಮೊದಲಷ್ಟೇ ಇರುತ್ತದೆ, ಕೊನೆಯಲ್ಲ.
ಒಳಗೆ ಇನ್ನಷ್ಟು ನಮ್ಮ-ನಿಮ್ಮ ಕಥೆಗಳಿವೆ. ಓದಿ ನೋಡಿ. ಹ್ಯಾಪಿ ರೀಡಿಂಗ್...
-ಅರ್ಜುನ್ ದೇವಾಲದಕೆರೆ
ನೀನಾ ಮಾಟಗಾತಿ ? - ಮಂತ್ರ ತಂತ್ರದ ಹನ್ನೊಂದು ಕಥೆಗಳು.
“ಈಗ ಹೋದಳಲ್ಲ ಹುಡುಗಿ, ಯಾರವಳು...!?” ಹರಿನಾಥರ ಬಳಿ ಬಂದ ಕೂಡಲೇ ಕೇಳಿದ್ದರು ರುದ್ರದೇವ.
“ಅವಳಾ...? ಕಾವ್ಯ ಅಂತ. ಒಳ್ಳೆ ಹುಡುಗಿ. ನಮ್ಮ ದಾನಪ್ಪ ರೆಡ್ಡಿ ಮಗಳು. ಯಾಕೆ ಏನಾಯ್ತು...?” ಎಂದಿದ್ದರು ಹರಿನಾಥ. ಅರೆಕ್ಷಣ ಏನನ್ನೋ ಯೋಚಿಸುತ್ತ ನಿಂತ ರುದ್ರದೇವ,
“ಆ ಹುಡುಗಿಯ ಮೇಲೆ ವಾಮಾಚಾರ ಪ್ರಯೋಗವಾಗಿದೆ!” ಎಂದಿದ್ದರು ತಣ್ಣನೆ. ನಗು ಮುಖವನ್ನಿಟ್ಟುಕೊಂಡು, ತೀರ್ಥದ ಬಟ್ಟಲಿನ ತುಳಸಿ ಎಲೆಯನ್ನ ಕೈಗೆತ್ತಿಕೊಳ್ಳುತ್ತಿದ್ದ ಹರಿನಾಥರು ಬೆಚ್ಚಿಬಿದ್ದು “ಏನ್ ಹೇಳ್ತಿದ್ದೀರಾ...!?” ಕೇಳಿಸಿಕೊಂಡದ್ದೇ ಸುಳ್ಳೇನೋ ಎನ್ನುವಂತೆ ಕೇಳಿದ್ದರು. ಯೋಚನೆಯ ಸುಳಿಯಲ್ಲೇ ಇದ್ದ ರುದ್ರದೇವ ಮತ್ತೊಂದು ಕ್ಷಣ ತಡೆದು “ಅವಳ ಮೇಲೆ ಮಾರಣ ವಿದ್ಯೆಯ ಪ್ರಯೋಗವಾಗಿದೆ. ಅವಳಿನ್ನು ಹೆಚ್ಚುದಿನ ಬದುಕುವುದಿಲ್ಲ. ಬಾಗಿಲು ದಾಟುವಾಗ ಅವಳ ಮುಖ ನೋಡಿದೆ. ಅಲ್ಲಿ ಸಾವು ಬೆನ್ನತ್ತಿ ಕುಳಿತಿರುವಾಗ ಕಾಣುವ ವಿಲಕ್ಷಣ ಕಳೆಯೊಂದಿತ್ತು. ಕಣ್ಣಲ್ಲಿ ವಾಮಾಚಾರಕ್ಕೆ ಒಳಗಾದ ಸೂಚನೆಯಿತ್ತು. ಅವಳು ಬದುಕುವುದಿಲ್ಲ...” ಎಂದಿದ್ದರು ನಿಧಾನವಾಗಿ. ಕಣ್ಮುಂದೆ ಆಡಿ ಬೆಳೆದ ಹುಡುಗಿಯೊಬ್ಬಳ ಸಾವನ್ನ ಕಲ್ಪಿಸಿಕೊಳ್ಳಲೂ ಭಯವಾಗಿ, “ಏನಾಗಿದೆ ಸ್ವಲ್ಪ ಬಿಡಿಸಿ ಹೇಳ್ತೀರಾ ...?” ಎಂದಿದ್ದರು ಹರಿನಾಥ.
ತೋರ್ಬೆರಳಲ್ಲಿ ಪುಟ ತೆರೆದು ನೋಡಿ ... ಸಾವಿನ ಇನ್ನಷ್ಟು ಬಿಕ್ಕಳಿಕೆಗಳಿವೆ ಒಳಗೆ.
ಅಭೀರ(ಅತೀತ ಭಾಗ - ೨)
- ಇದು ರಕ್ತದಲ್ಲಿ ಬರೆದ ಪ್ರೇಮ ಕಥೆ
ಹಾಗೆ ಕರ್ನಾಟಕ ಮತ್ತು ಆಂಧ್ರದ ಗಡಿ ಜಿಲ್ಲೆ ಬಳ್ಳಾರಿಯ ನಿಲ್ಲೂರಿನಿಂದ ಅನಾಮತ್ತಾಗಿ ಹೊರಡಿಸಿಕೊಂಡು ಬಂದ ಲೀಲಾಳನ್ನ, ಅದೆಷ್ಟೋ ದಿನಗಳ ಕಾಲ ನಡೆಸಿಕೊಂಡೇ ಹೊರಟಿದ್ದ ಹರಿಣಾಕ್ಷ. ಅವಳು ಕೂಡ ಯಾವುದೋ ಟ್ರಾನ್ಸ್ ಗೆ ಒಳಗಾದವಳಂತೆ, ಅವನ ಹಿಂದೆಯೇ ತಾಯಿಯನ್ನ ಹಿಂಬಾಲಿಸುವ ಮಗುವಿನಂತೆ ಹೆಜ್ಜೆಗೆ ಹೆಜ್ಜೆ ಸೇರಿಸಿ ನಡೆಯುತ್ತಿದ್ದಳು. ಹರಿಣಾಕ್ಷ ಬಿಳಿ ಪಂಚೆ ಬಿಳಿ ಅಂಗಿಯನ್ನ ಧರಿಸಿ, ತನ್ನ ಇಳೆ ಬೀಳುವ ನೀರು ಕಾಣದ ಕೂದಲನ್ನ ಮಡಚಿ ತಲೆಗೆ ಕಟ್ಟಿದ್ದ ಪೇಟದಲ್ಲಿ ಅಡಗಿಸಿದ್ದ. ಉದ್ದ ಗಡ್ಡವನ್ನ ನೀಟಾಗಿ ಅರ್ಧಕ್ಕೆ ಕತ್ತರಿಸಿ ಶಿವಾಜಿ ಮಹಾರಾಜರ ಗಡ್ಡದಂತೆ ಮಾಡಿಕೊಂಡಿದ್ದ. ಜರಿ ಲಂಗ ತೊಟ್ಟಿದ್ದ ಲೀಲಾ ಅವನನ್ನ ಹಿಂಬಾಲಿಸುತ್ತಿದ್ದರೆ, ಗಂಡ ಹೆಂಡತಿ ಯಾವುದೋ ಹಬ್ಬಕ್ಕೋ, ಜಾತ್ರೆಗೋ, ಮದುವೆಗೋ ಹೋಗಿ ಮನೆಗೆ ಹಿಂದುರುಗುತ್ತಿರುವಂತೆ ಭಾಸವಾಗುತಿತ್ತು ನೋಡುಗರಿಗೆ. ಲೀಲಾಳನ್ನ ಹಾಗೆ ಅನಾಮತ್ತು ಹೊರಡಿಸಿಕೊಂಡು ಹೊರಟ ಮೊದಲ ದಿನ, ತಲೆ ಸುಡುವ ಬಿಸಿಲನ್ನೂ ಲೆಕ್ಕಿಸದೆ ಸಂಜೆಯವರೆಗು ಎಲ್ಲಿಯೂ ನಿಲ್ಲದೆ ನಡಿಸಿದ್ದ ಹರಿಣಾಕ್ಷ. ಮಾರ್ಗ ಮಧ್ಯೆ ಒಂದೇ ಒಂದು ಮಾತಿಲ್ಲ. ಮನಸ್ಸು ಟ್ರಾನ್ಸ್ ನಲ್ಲಿದ್ದರು, ಹೊಟ್ಟೆ ಕೇಳಬೇಕಲ್ಲ. ಸಂಜೆಯ ವೇಳೆಗೆ, ಹಸಿದ ಹೊಟ್ಟೆ ನಡಿಗೆಯನ್ನ ಕುಂಠಿತ ಮಾಡಿ, ಕೊನೆಗೊಮ್ಮೆ ದಾರಿಯಲ್ಲಿ ಪ್ರಜ್ಞೆ ತಪ್ಪಿದ್ದಳು ಲೀಲಾ. ಹರಿಣಾಕ್ಷನಿಗೆ ಹಸಿವಿನ ತೊಂದರೆಯಿರಲಿಲ್ಲ. ಅವನು ನೀರಾನ್ನ ತ್ಯಜಿಸಿ ವಾರಗಳೇ ಕಳೆದಿತ್ತು. ಹಸಿವು, ಅವನು 'ಬಾ' ಎಂದರೆ ಮಾತ್ರ ಬರುತಿತ್ತು. ಅಘೋರಿಗಳೇ ಹಾಗೆ, ಅವರು ಎಲ್ಲವನ್ನ ಮೀರಿದವರು. ಬೇಕೆಂದರೆ ಬೇಕು, ಬೇಡವೆಂದರೆ ಬೇಡ. ಸರಳ, ಕ್ಷಣಿಕ ಕಾಮದ ಉತ್ತುಂಗದಲ್ಲಿ ಲೈಂಗಿಕವಾಗಿ ಸಕ್ರಿಯರಾಗಿದ್ದಾಗಲೂ ಗಂಟೆಗಟ್ಟಲೆ ಸ್ಖಲನವನ್ನ ಮುಂದೂಡುವ ತಾಕತ್ತಿರುವ ಸಾಧಕರಿಗೆ, ಹಸಿವೊಂದು ಲೆಕ್ಕವೇ!? ಸಂಜೆಯ ವೇಳೆಗೆ ಹರಿಣಾಕ್ಷನಿಗೆ ‘ಇವಳು ನನ್ನ ಹಾಗೆ ಅಘೋರಿಯಲ್ಲ ಇವಳಿಗೆ ಹಸಿವು, ಬಾಯಾರಿಕೆಗಳಾಗುತ್ತವೆ’ ಎನ್ನುವ ಸತ್ಯದ ನೆನಪಾಗಿ, ರಸ್ತೆ ಬದಿಯ ಅಂಗಡಿಯೊಂದರಲ್ಲಿ ಒಂದಷ್ಟು ಬಿಸ್ಕತ್, ನೀರು ಕೊಡಿಸಿದ್ದ. ಸ್ವಲ್ಪ ಚೇತರಿಸಿಕೊಂಡವಳನ್ನ ಮತ್ತೆ ನಡೆಸಿಕೊಂಡು ಹೊರಟಿದ್ದ. ಮುಂದಿನ ಪೂರ್ಣ ಹುಣ್ಣಿಮೆಯ ದಿನದ ಒಳಗೆ ಗುವಾಹಟಿಯ ಕಾಮಾಕ್ಯ ದೇವಸ್ಥಾನ ತಲುಪುವುದಷ್ಟೇ ಅವನ ಸದ್ಯದ ಗುರಿ...
ಇದು ಅತೀತ ಕಾದಂಬರಿಯ ಮುಂದುವರಿದ ಭಾಗ. ಅತೀತ ಕಾದಂಬರಿಯನ್ನ ಓದಿದ ಮೇಲೆಯೇ ಈ ಕಾದಂಬರಿಯನ್ನ ಓದುವುದು ಉತ್ತಮ.
-ಅರ್ಜುನ್ ದೇವಾಲದಕೆರೆ